ಪ್ರಚಲಿತ ಸಂಗತಿಗಳ ಗೋಷ್ವಾರೆಯನ್ನೊಳಗೊಂಡ ಸುದ್ದಿ ಹಾಳೆಗಳನ್ನು ಅಥವಾ ವೃತ್ತಪತ್ರಿಕೆಗಳನ್ನು ಗೆಜ಼ಿಟ್ ಎಂದು ಕರೆಯುತ್ತಿದ್ದರು. ಇವು ಆಧುನಿಕ ವೃತ್ತಪತ್ರಿಕೆಗಳ ಪುರ್ವಜ ರೂಪಗಳೆನ್ನಬಹುದು. ಈ ಶಬ್ದಕ್ಕೆ ಮೂಲ ಗಾಝಾ (ವೃತ್ತ ಭಂಡಾರ) ಎಂಬ ಗ್ರೀಕ್ ಪದ. ಇಂಗ್ಲಿಷಿಗೆ ಗೆಜ಼ಿಟ್ ಎಂಬ ಶಬ್ದ ಫ್ರೆಂಚ್ನಿಂದ ಬಂತು; ಅದಕ್ಕೆ ಇಟಾಲಿಯನ್ ಭಾಷೆಯ ಗೆಜ಼ಿಟಾ ಮೂಲ. ಫ್ರೆಂಚ್ ಭಾಷೆಯಲ್ಲಿ ಗೆಜ಼ಿಟಾ ಎಂಬ ಹೆಸರನ್ನೇ ಈಗಲೂ ಬಳಸಲಾಗುತ್ತಿದೆ. ವೆನಿಸ್ನಲ್ಲಿ ಗೆಜ಼ಿಟಾ ಒಂದು ಚಿಕ್ಕ ನಾಣ್ಯದ ಹೆಸರಾಗಿತ್ತು. 1566ರಲ್ಲಿ ವೆನಿಸ್ ಸರ್ಕಾರ ಪ್ರಕಟಿಸಿ, ಈ ಮೊತ್ತಕ್ಕೆ ಮಾರುತ್ತಿದ್ದ ಸೂಚೀಪತ್ರಕ್ಕೆ ಇದೇ ಹೆಸರು ಬಂತು. 16ನೆಯ ಶತಮಾನದ ನಡುಗಾಲದಲ್ಲಿ ವೆನಿಸಿನಲ್ಲಿ ಪ್ರಕಟವಾಗಲಾರಂಭಿಸಿದ ಲೋಕಾಭಿರಾಮದ ಸುದ್ದಿ ಹಾಳೆಗಳಿಗೆ ಈ ಹೆಸರಿತ್ತು. ಇದೇ ಬಗೆಯ ಪತ್ರಗಳು ಫ್ರಾನ್ಸ್‌ ಇಂಗ್ಲೆಂಡುಗಳಲ್ಲೂ ತಲೆದೋರಿದುವು. ಒಂದನೆಯ ಎಲಿಜ಼ಬೆತಳ ಸಿಂಹಾಸನಾರೋಹಣವಾದ ಮೇಲೆ ಇಂಥ ಸುದ್ದಿಹಾಳೆಗಳು ಹೆಚ್ಚಿದುವು. ಹರಟೆ, ಸುದ್ದಿ ತುಣುಕು, ಅನಧಿಕೃತ ವೃತ್ತಾಂತ ನಿರೂಪಣೆ, ದೇಶವಿದೇಶ ಪರ್ಯಟನೆ, ಕೊಲೆಯೇ ಮುಂತಾದ ಘಟನೆಗಳು, ವದಂತಿಗಳು, ಜಾಹೀರಾತುಗಳು ಮುಂತಾದವನ್ನೊಳಗೊಂಡ ಆಕರ್ಷಕ ಪತ್ರಗಳು ಹೊರ ಬೀಳಲಾರಂಭಿಸಿದುವು. 17ನೆಯ ಶತಮಾನದಿಂದೀಚೆಗೆ ಗೆಜ಼ಿಟ್ ಎಂಬ ಶಬ್ದ ಅಧಿಕೃತ ಸರ್ಕಾರಿ ಪ್ರಕಟಣೆಗಳಿಗೆ ಅಧಿಕಾಧಿಕವಾಗಿ ಅನ್ವಯವಾಗತೊಡಗಿತು. ಆಕ್ಸ್‌ಫರ್ಡ್ ಗೆಜ಼ಿಟ್, ಲಂಡನ್ ಗೆಜ಼ಿಟ್, ಡಬ್ಲಿನ್ ಗೆಜ಼ಿಟ್ ಉದಾಹರಣೆಗಳು. ಸರ್ಕಾರಿ ವಿಷಯಗಳನ್ನು, ನೇಮಕ ವಿವರಗಳನ್ನು, ಅಧಿಕೃತ ಪರಿನಿಯತ ಪತ್ರಗಳನ್ನು ಒಳಗೊಂಡ ಪತ್ರಿಕೆ ಎಂಬುದು ಸಾಮಾನ್ಯವಾಗಿ ಇದರ ಈಗಿನ ಅರ್ಥ. ಆದರೆ ವೃತ್ತಪತ್ರಿಕೆಗಳ ಹೆಸರುಗಳ ಕೊನೆಯಲ್ಲೂ ಕ್ವಚಿತ್ತಾಗಿ ಈ ಶಬ್ದವನ್ನು ಬಳಸುವುದುಂಟು. ದಿ ಪಾಲ್ ಮಾಲ್ ಗೆಜ಼ಿಟ್, ದಿ ಸೇಂಟ್ ಜೇಮ್ಸ್‌ ಗೆಜ಼ಿಟ್, ದಿ ವೆಸ್ಟ್‌ಮಿನ್ಸ್ಟರ್ ಗೆಜ಼ಿಟ್ ಮುಂತಾದವು 20ನೆಯ ಶತಮಾನದ ಆದಿಭಾಗದಲ್ಲಿ ಲಂಡನಿನಿಂದ ಪ್ರಕಟವಾದ ವೃತ್ತಪತ್ರಿಕೆಗಳು. ಬ್ರಿಟನ್ನಲ್ಲಿ ಈಗಲೂ ಪ್ರಕಟವಾಗುತ್ತಿರುವ ಹಲವು ವೃತ್ತಪತ್ರಿಕೆಗಳ ಹೆಸರುಗಳಲ್ಲಿ ಗೆಜ಼ಿಟ್ ಎಂಬ ಶಬ್ದ ಉಳಿದುಬಂದಿದೆ. ಅಮೆರಿಕದ ದಿ ಪೆನ್ಸಿಲ್ವೇನಿಯ ಗಜೆóಟ್ ಎಂಬ ಪತ್ರಿಕೆ ಅತ್ಯಂತ ಪ್ರಭಾವಶಾಲಿಯಾಗಿತ್ತು. ಗೆಜ಼ಿಟ್ ಎಂಬ ಉತ್ತರಪದವನ್ನೊಳಗೊಂಡ ಹಲವು ವೃತ್ತಪತ್ರಿಕೆಗಳು ಅಮೆರಿಕದಲ್ಲಿ ಪ್ರಕಟವಾಗುತ್ತಿದ್ದುವು. ಸಂಯುಕ್ತ ಸಂಸ್ಥಾನಗಳ ಗೆಜ಼ಿಟ್ ಮತ್ತು ದಿ ನ್ಯಾಷನಲ್ ಗೆಜ಼ಿಟ್ ಇನ್ನೆರಡು ಉದಾಹರಣೆಗಳು. 18ನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭವಾದ ಬೆಂಗಾಲ್ ಗೆಜ಼ಿಟ್, ಇಂಡಿಯ ಗೆಜ಼ಿಟ್ ಇವು ಭಾರತದ ಆದಿಪತ್ರಿಕೆಗಳು. ಭಾರತದಲ್ಲಿ ಸ್ಥಾಪಿತವಾದ ಬ್ರಿಟಿಷ್ ಆಳ್ವಿಕೆಯಲ್ಲಿ ಸರ್ಕಾರಗಳ ಅಧಿಪತ್ರಗಳಾಗಿ ಗೆಜೆಟ್ಟುಗಳು ಪ್ರಕಟವಾಗತೊಡಗಿದುವು. ಈಗ ಎಲ್ಲ ರಾಜ್ಯ ಸರ್ಕಾರಗಳೂ ಗೆಜ಼ಿಟ್ಟುಗಳನ್ನು ಪ್ರಕಟಿಸುತ್ತಿವೆ. ಮೈಸೂರು ಸರ್ಕಾರದ ಗೆಜೆಟ್ಟು “ದಿ ಮೈಸೂರ್ ಗೆಜ಼ಿಟ್ “(ನಂತರ ದಿ ಕರ್ನಾಟಕ ಗೆಜ಼ಿಟ್ - ಕನ್ನಡದಲ್ಲಿ `ಕರ್ನಾಟಕ ರಾಜ್ಯಪತ್ರ’) ಎಂಬ ಹೆಸರಿನಲ್ಲಿ ಸು. 1866 ರಿಂದ ಪ್ರಕಟವಾಗುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಗೆಜೆóಟ್ 1965ರ ಫೆಬ್ರುವರಿ 15 ರಿಂದ, ಕನ್ನಡದ ಗೆಜ಼ಿಟ್ 1968ರ ನವೆಂಬರ್ 1 ರಿಂದ ಪ್ರಕಟವಾಗುತ್ತಿವೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ